ಪೃಥ್ವೀರಾಜ
	12ನೆಯ ಶತಮಾನದಲ್ಲಿ ಅಜಮೀರ ದೆಹಲಿಗಳನ್ನಾಳುತ್ತಿದ್ದ ಚಾಹಮಾನ ವಂಶದ ದೊರೆ. ಸೋಮೇಶ್ವರನ ಮಗ. ಇವನ ತಾಯಿ ಕರ್ಪೂರದೇವಿ. ಈಕೆ ತ್ರಿಪುರಿಯ ಹೈಹಯ ವಂಶದ ಅಚಲರಾಜನ ಮಗಳು. ತಂದೆಯ ಆಳ್ವಿಕೆಯ ಕಾಲದಲ್ಲಿ ಪೃಥ್ವೀರಾಜ ಸಾಹಿತ್ಯ, ಕಲೆ, ಸಮರ ವಿದ್ಯೆಗಳಲ್ಲಿ ಪಾರಂಗತನಾದ. 1177ರಲ್ಲಿ ಸೋಮೇಶ್ವರ ಮಡಿದಾಗ ಪೃಥ್ವೀರಾಜ ಇನ್ನೂ ಬಾಲಕನಾಗಿದ್ದುದರಿಂದ ತಾಯಿ ಕರ್ಪೂರದೇವಿ ಇವನ ಪರವಾಗಿ ರಾಜ್ಯವಾಳಿದಳು. ಆ ಸಮಯದಲ್ಲಿ ಕದಂಬ ವಾಸ ಮುಖ್ಯಮಂತ್ರಿಯಾಗಿ ಇವರಿಗೆ ನೆರವಾದ. ಭುವನೈಕಮಲ ಎಂಬವನು ಮಹಾದಂಡನಾಯಕನಾಗಿದ್ದ. ರಾಣಿಯ ಆಳ್ವಿಕೆಯ ಕಾಲದಲ್ಲಿ ಅಜಯಮೇರು (ಅಜ್ಮೀರ್) ಉಚ್ಛ್ರಾಯ ಸ್ಥಿತಿಗೆ ಏರಿತು. ಪೃಥ್ವೀರಾಜ ಪ್ರಾಪ್ತ ವಯಸ್ಕನಾದ ಕೂಡಲೇ ಸಿಂಹಾಸನವೇರಿ ರಾಜ್ಯಸೂತ್ರಗಳನ್ನು ಕೈಗೆ ತೆಗೆದುಕೊಂಡ. ಇವನಿಗೆ ಅನೇಕ ಪತ್ನಿಯರಿದ್ದರೆಂದು ಪೃಥ್ವೀರಾಜ ರಾಸೋ ಎಂಬ ಗ್ರಂಥದಿಂದ ತಿಳಿಯುತ್ತದೆ. ಅಬೂ ಪ್ರಾಂತ್ಯದ ದೊರೆ ಪರಮಾರ ಚೈತನ್ಯನ ಮಗಳಾದ ಇಚ್ಚಣಿದೇವಿ ಪಟ್ಟಮಹಿಷಿಯಾಗಿದ್ದಳು. ಇತರ ರಾಣಿಯರಲ್ಲಿ ದೇವಗಿರಿಯ ಯಾದವ ವಂಶದ ಬಾಣ ದೊರೆಯ ಮಗಳು ಶಶಿವ್ರತಾ, ಕನೌಜನ ಗಾಹಡವಾರಿ ವಂಶದ ಜಯಚಂದ್ರನ ಮಗಳು ಸಂಯೋಗಿತಾ ಮುಖ್ಯರು. 

ಸಂಯೋಗಿತೆಯನ್ನು ಪೃಥ್ವೀರಾಜ ವಿವಾಹವಾದ ಬಗ್ಗೆ ಒಂದು ದಂತಕತೆಯಿದೆ. ಪೃಥ್ವೀರಾಜ ವಿಜಯ ಎಂಬ ಗ್ರಂಥದ ಪ್ರಕಾರ ಸಂಯೋಗಿತೆ ಅಪೂರ್ವ ರೂಪ ಲಾವಣ್ಯಗಳುಳ್ಳ ಸುಂದರಿ ಎಂದು ಆ ಕಾಲದಲ್ಲಿ ಖ್ಯಾತಿ ಪಡೆದಿದ್ದಳು. ಅವಳಿಗೆ ತಕ್ಕ ವರನನ್ನು ಹುಡುಕಲು ಜಯಚಂದ್ರ, ರಜಪೂತ ಪದ್ಧತಿಯಂತೆ ಸ್ವಯಂವರ ಏರ್ಪಡಿಸಿದ. ಅದಕ್ಕೆ ಬರಬೇಕೆಂದು ಅನೇಕ ರಾಜರಿಗೆ ಆಮಂತ್ರಣ ನೀಡಿದ. ಆದರೆ, ಪೃಥ್ವೀರಾಜನಿಗೆ ಆಹ್ವಾನ ಹೋಗಿರಲಿಲ್ಲ. ಪೃಥ್ವೀರಾಜನನ್ನು ಬಿಟ್ಟು ಅನ್ಯರನ್ನು ವರಿಸಲು ಸಂಯೋಗಿತೆ ಸಿದ್ಧಳಿರಲಿಲ್ಲ. ಸ್ವಯಂವರದ ಸಮಯದಲ್ಲಿ ಪೃಥ್ವೀರಾಜ ಸಂಯೋಗಿತೆಯನ್ನು ಅಪಹರಿಸಿಕೊಂಡು ಹೋಗಿ ವಿವಾಹವಾದ. ಈ ಘಟನೆಗೆ ಚಾರಿತ್ರಿಕ ಆಧಾರಗಳು ದೊರಕುವುದಿಲ್ಲವಾದರೂ ಜಯಚಂದ್ರನಿಗೂ ಪೃಥ್ವೀರಾಜನಿಗೂ ವೈರವಿತ್ತೆನ್ನಬಹುದು.

	ಪಂಜಾಬನ್ನು ಆಳುತ್ತಿದ್ದ ಘಜ್ನವೀಡರ ಮನೆತನವನ್ನೂ ಸೋಲಿಸಿದ ಮಹಮ್ಮದ್ ಘೋರಿಗೂ ನೆರೆಯ ಪೃಥ್ವೀರಾಜನಿಗೂ 1191ರಲ್ಲಿ ಯುದ್ಧ ಅನಿವಾರ್ಯವೆನಿಸಿತು. ಈ ಉತ್ಕಟ ಸಮಯದಲ್ಲಿ ಜಯಚಂದ್ರ ಪೃಥ್ವೀರಾಜನಿಗೆ ನೆರವಾಗಲಿಲ್ಲ. ಇತರ ಹಲವು ರಾಜರು ಇವನಿಗೆ ಬೆಂಬಲವಾಗಿ ನಿಂತರು. ಪೃಥ್ವೀರಾಜ 3,00,000 ಅಶ್ವಗಳು ಮತ್ತು 3,000 ಆನೆಗಳಿಂದ ಕೂಡಿದ ಸೈನ್ಯದೊಡನೆ ಘೋರಿಯನ್ನು ಎದುರಿಸದನೆಂದು ಫೆರಿಸ್ತ ಎಂಬ ಇತಿಹಾಸಕಾರ ಹೇಳುತ್ತಾನೆ. ದೆಹಲಿಯ ಸಮೀಪದ ಸ್ಥಾಣೇಶ್ವರದ ಬಳಿಯ ತರೈನ್‍ನಲ್ಲಿ ಯುದ್ಧ ನಡೆಯಿತು. ಪೃಥ್ವೀರಾಜನ ಸೈನಿಕರ ಮುಂದೆ ಘೋರಿಯ ಸೈನಿಕರು ಹಿಮ್ಮೆಟ್ಟಿದರು. ಸುಲ್ತಾನ ರಣರಂಗದಿಂದ ಓಡಿ ಹೋದ, ಪೃಥ್ವೀರಾಜನಿಗೆ ಜಯ ಲಭಿಸಿತು.

	ಮಹಮ್ಮದ್ ಘೋರಿ ಘಜ್ನಿಗೆ ಹಿಂತಿರುಗಿ ಪೃಥ್ವೀರಾಜನ ಮೇಲೆ ಸೇಡು ತೀರಿಸಿಕೊಳ್ಳಲು ವಿಪುಲ ಸಿದ್ಧತೆಯಲ್ಲಿ ತೊಡಗಿದ. ಈ ಅವಧಿಯಲ್ಲಿ ಬರಲಿರುವ ಅಪಾಯವನ್ನು ಊಹಿಸಿ ಪೃಥ್ವೀರಾಜನೂ ಸೇನಾ ಸಿದ್ಧತೆಯಲ್ಲಿ ತೊಡಗಿದ್ದ. ಇವನ ಬಳಿ 3,00,000 ಕುದುರೆಗಳೂ 3,000 ಆನೆಗಳೂ ಅಸಂಖ್ಯಾತ ಪದಾತಿ ಸೈನ್ಯವೂ ಯುದ್ಧಕ್ಕೆ ಸಿದ್ಧವಾಗಿತ್ತು. ಭಾರತದ ಅನೇಕ ದೊರೆಗಳು ಇವನ ಬೆಂಬಲಕ್ಕೆ ನಿಂತಿದ್ದರು. 1192ರಲ್ಲಿ ಮಹಮ್ಮದ್ ಘೋರಿ ಮತ್ತೆ ದಂಡೆತ್ತಿ ಬಂದ. ಪೃಥ್ವೀರಾಜ ತನ್ನ ದಂಡನಾಯಕರಾದ ಉದಯರಾಜ ಮತ್ತು ಗೋವಿಂದರಾಜರೊಡನೆ ಹೊರಟು, ಘೋರಿಯ ಸೈನ್ಯವನ್ನು ಸ್ಥಾಣೇಶ್ವರದ ಬಳಿಯಲ್ಲೇ ಎದುರಿಸಿದ. ಹಿಂದೂ ಸೈನಿಕರು ಈ ಬಾರಿ ಜಯ ತಮಗೆ ಖಂಡಿತವೆಂದು ಅಜಾಗರೂಕರಾಗಿದ್ದರು. ನದಿಯ ಸಮೀಪದಲ್ಲಿ ಬೀಡುಬಿಟ್ಟಿದ್ದ ಪೃಥ್ವೀರಾಜನ ಸೈನಿಕರು ರಾತ್ರಿ ಯುದ್ಧದ ನಿರೀಕ್ಷಣೆಯಿಲ್ಲದೆ ಮೈಮರೆತು ಮಲಗಿದ್ದಾಗ ಮಹಮ್ಮದ್ ಘೋರಿ ಬೇರೊಂದು ಕಡೆ ತನ್ನ ಸೈನ್ಯದೊಡನೆ ಹೊರಟು ನದಿಯನ್ನು ದಾಟಿ ಪೃಥ್ವೀರಾಜನ ಶಿಬಿರದ ಮೇಲೆ ಹಠಾತ್ತನೆ ದಾಳಿ ಇಟ್ಟ. ಇಡೀ ರಾತ್ರಿಯೆಲ್ಲ ಹೋರಾಟ ನಡೆಯಿತು. ಮಧ್ಯಾಹ್ನದ ವೇಳೆಗೆ ಹೋರಾಟ ಉಗ್ರವಾಯಿತು. ಪೃಥ್ವೀರಾಜನ ಕಡೆ ಒಂದು ಲಕ್ಷ ಸೈನಿಕರು ಮಡಿದರು. ಸ್ವಾಮಿನಿಷ್ಠ ಸೇವಕ ಗೋವಿಂದರಾಜ ಹೋರಾಡುತ್ತಲೇ ರಣರಂಗದಲ್ಲಿ ಮಡಿದ. ಇಂಥ ವಿಪತ್ತಿನ ಸಮಯದಲ್ಲಿ ಪೃಥ್ವೀರಾಜ ತಾನು ಏರಿದ್ದ ಆನೆಯಿಂದ ಇಳಿದು ಕುದುರೆಯನ್ನೇರಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಶತ್ರು ಸೈನಿಕರಿಗೆ ಸೆರೆ ಸಿಕ್ಕಿದ. ಮಹಮ್ಮದ್ ಘೋರಿ ಇವನನ್ನು ಕ್ರೂರವಾಗಿ ಕೊಲ್ಲಿಸಿದ. ಮಹಮ್ಮದ್ ಘೋರಿಯ ವಿಜಯ ಮತ್ತು ಪೃಥ್ವೀರಾಜನ ಮರಣದೊಂದಿಗೆ ಭಾರತದಲ್ಲಿ ಮುಸ್ಲಿಮರ ಆಡಳಿತಕ್ಕೆ ಅಸ್ತಿಭಾರ ಹಾಕಿದಂತಾಯಿತು.								(ಕೆ.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ